ಕಲ್ಲಂಗಡಿ : ಕುಕುರ್ಬಿಟೇಸೀ ಕುಟುಂಬಕ್ಕೆ ಸೇರಿದ ಸಿಟ್ರಲಸ್ ವಲ್ಗ್ಯಾರಿಸ್ ಎಂಬ ವೈಜ್ಞಾನಿಕ ಹೆಸರಿನ ಜನಪ್ರಿಯವಾದ ಹಾಗೂ ಹೆಸರುವಾಸಿಯಾದ ಬೇಸಗೆ ಹಣ್ಣಿನ ಸಸ್ಯ (ವಾಟರ್ ಮೆಲನ್). ಇದರ ಉಗಮಸ್ಥಾನ ಆಫ್ರಿಕ ಖಂಡವೆಂದು ಒಂದು ಅಭಿಪ್ರಾಯವೂ ಏಷ್ಯ-ಮುಖ್ಯವಾಗಿ ಭಾರತ-ಎಂದು ಇನ್ನೊಂದು ಅಭಿಪ್ರಾಯವೂ ಇದೆ. ತವರು ಯಾವುದೇ ಇರಲಿ ಕಲ್ಲಂಗಡಿಯನ್ನು ಇದರ ರುಚಿಯಾದ ಹಣ್ಣುಗಳಿಗಾಗಿ ಪ್ರಾಚೀನ ಕಾಲದಿಂದಲೂ ಪ್ರಪಂಚದ ಉಷ್ಣಪ್ರದೇಶಗಳಲ್ಲಿ ಬೆಳೆಸುತ್ತಿದ್ದಾರೆ. ಈಜಿಪ್ಟಿನ ಪಿರಮಿಡ್ಡುಗಳಲ್ಲಿನ ವರ್ಣಚಿತ್ರಗಳಲ್ಲೂ ಈ ಹಣ್ಣಿನ ಬಗ್ಗೆ ಉಲ್ಲೇಖವಿದೆ.

ಭಾರತ, ಈಜಿಪ್ಟ್‌, ದಕ್ಷಿಣ ಆಫ್ರಿಕ, ಅಮೆರಿಕದ ಸಂಯುಕ್ತಸಂಸ್ಥಾನಗಳ ದಕ್ಷಿಣ ಭಾಗ, ದಕ್ಷಿಣ ಫ್ರಾನ್ಸ್‌ ಹಾಗೂ ದಕ್ಷಿಣ ರಷ್ಯಗಳಲ್ಲಿ ಕಲ್ಲಂಗಡಿಯನ್ನು ಹೆಚ್ಚಾಗಿ ಬೆಳೆಸುತ್ತಾರೆ.

ಸಸ್ಯವಿವರಣೆ
ನೆಲದ ಮೇಲೆ ಅಗಲವಾಗಿ ಹರಡಿಕೊಂಡು ಬೆಳೆಯುವ ಬಳ್ಳಿ ಇದು. ಬಹುವಾಗಿ ಕವಲೊಡೆಯುತ್ತದೆ. ಕಾಂಡದ ಮೇಲೆಲ್ಲ ಸಣ್ಣ ರೋಮಗಳಿವೆ. ಎಲೆಗಳು ಪರ್ಯಾಯವಾಗಿ ಜೋಡಣೆಗೊಂಡಿವೆ; ಇವು ಅಗಲ ಮತ್ತು ಹಸ್ತಾಕಾರವಾಗಿರುವುವಲ್ಲದೆ ಹಲವಾರು ಹಾಲೆಗಳಾಗಿ ಸೀಳುಗೊಂಡಿವೆ. ಎಲೆತೊಟ್ಟುಗಳು ಚಿಕ್ಕವು. ಎಲೆಗಳ ಕಂಕುಳಲ್ಲಿ ಹಳದಿಬಣ್ಣದ ಚಿಕ್ಕ ಹೂಗಳು ಒಂಟೊಂಟಿಯಾಗಿ ಅರಳುತ್ತವೆ. ಹೂಗಳು ಏಕಲಿಂಗಿಗಳು. ಗಂಡು ಹೂವಿನಲ್ಲಿ ಐದು ಪುಷ್ಪಪತ್ರಗಳಿಂದ ಕೂಡಿದ ಗಂಟೆಯಾಕಾರದ ಪುಷ್ಪಪಾತ್ರೆಯೂ ಐದು ದಳಗಳಿಂದಾದ ಸಂಯುಕ್ತ ಮಾದರಿಯ ಪುಷ್ಪದಳ ಸಮೂಹವೂ ಮೂರು ಕೇಸರಗಳೂ ಇವೆ. ಹೆಣ್ಣು ಹೂವಿನಲ್ಲಿ ಗಂಡು ಹೂವಿನಲ್ಲಿರುವಷ್ಟೇ ಸಂಖ್ಯೆಯ ಪುಷ್ಪಪತ್ರಗಳೂ ದಳಗಳೂ ಮೂರು ಕಾರ್ಪೆಲುಗಳಿಂದಾದ ಒಂದು ನೀಚಸ್ಥಾನದ ಅಂಡಾಶಯವೂ ಇವೆ. ಅಂಡಾಶಯದಲ್ಲಿ ಹಲವಾರು ಅಂಡಕಗಳಿವೆ. ಫಲ ಒಡೆಯದ ಬೆರಿ ಮಾದರಿಯದು. ಗುಂಡಾಗಿಯೊ ಉದ್ದುದ್ದವಾಗಿಯೊ ಇದೆ. ಪೂರ್ಣ ಬೆಳೆವಣಿಗೆ ಆದಾಗ ಸುಮಾರು ೨೫-೫೦ ಪೌಂ. ತೂಗುತ್ತದೆ. ಹಣ್ಣಿನ ಮೇಲ್ಮೈ ನಯ ಹಾಗೂ ತಿಳಿಹಸಿರು ಅಥವಾ ಕಡುಹಸುರು ಬಣ್ಣದ್ದಾಗಿದೆ. ಕೆಲವು ತಳಿಗಳಲ್ಲಿ ಬಿಳಿಯ ಪಟ್ಟೆಗಳಿರುವುದೂ ಉಂಟು. ತಿರುಳು ರಸಭರಿತ ಹಾಗೂ ಕೆಂಪು ಬಣ್ಣದ್ದು. ಕಪ್ಪು, ಬಿಳಿಯ ಅಥವಾ ಕಂದು ಬಣ್ಣದ ಬೀಜಗಳನ್ನು ಒಳಗೊಂಡಿದೆ. ಜಪಾನಿನಲ್ಲಿ ಬೆಳೆಯಲಾಗುವ ಕಲ್ಲಂಗಡಿ ತಳಿಯೊಂದರಲ್ಲಿ ಬೀಜಗಳೇ ಇರುವುದಿಲ್ಲ.

ತಳಿಗಳು
ಕಲ್ಲಂಗಡಿಯಲ್ಲಿ ಹಲವಾರು ತಳಿಗಳಿವೆ. ಇವುಗಳ ಹಣ್ಣಿನ ಆಕಾರ, ಗಾತ್ರ, ಬಣ್ಣ, ತಿರುಳಿನ ರುಚಿ ಹಾಗೂ ಬಣ್ಣ, ಬೀಜಗಳ ಬಣ್ಣ ಹಾಗೂ ಕಾಯಿಗಳು ಪಕ್ವವಾಗುವ ಕಾಲ-ಇವುಗಳಲ್ಲೆಲ್ಲ ವೈವಿಧ್ಯ ಇದೆ. ಇವುಗಳಲ್ಲಿ ಮುಖ್ಯವಾಗಿ ಷಹಜಾನ್ ಪುರಿ, ಜಾನ್ ಪುರಿ ರೆಡ್, ಫರೂಕಬಾದಿ, ಅಲಹಬಾದಿ ಇತ್ಯಾದಿ ಉತ್ತರ ಭಾರತದ ಸ್ಥಳೀಯ ತಳಿಗಳು ಮತ್ತು ಮೈಸೂರು ರಾಜ್ಯದಲ್ಲಿ ಗೌಡ, ಸೆಲೆಕ್ಷನ್ ನಂ. ೧ ಮತ್ತು ಸೆಲೆಕ್ಷನ್ ನಂ. ೨ ಮುಂತಾದವು ಹೆಚ್ಚಿನ ಬೇಸಾಯದಲ್ಲಿವೆ. ಹೆಚ್ಚು ಇಳುವರಿ ಕೊಡುವ ಸುಧಾರಿಸಿದ ತಳಿಗಳನ್ನು ಹೊರ ದೇಶಗಳಿಂದ ತರಿಸಲಾಗಿದೆ. ಅವುಗಳ ಪೈಕಿ ಅಷಿಯ ಮಟೊ, ಶುಗರ್ ಬೇಬಿ, ನ್ಯೂ ಹೆಮಿಸ್ಫಿಯರ್ ಮಿಡ್ ಗಟ್ ಮುಂತಾದವು ಮುಖ್ಯವಾದುವು.
ಅಷಿಯಮಟೊ
ಈ ತಳಿಯನ್ನು ಜಪಾನ್ ದೇಶದಿಂದ ತರಿಸಲಾಗಿದೆ. ಇದರ ಹಣ್ಣುಗಳು ೬ ರಿಂದ ೭ ಕೆ.ಜಿ. ತೂಗುತ್ತವೆ. ಸಿಪ್ಪೆ ತಿಳಿ ಹಸುರು. ಮೇಲು ಭಾಗದಲ್ಲಿ ನಸು ಬಿಳುಪು ಪಟ್ಟೆಗಳಿವೆ. ಒಳತಿರುಳು ಸಿಹಿ ಮತ್ತು ಕೆಂಪು ಬಣ್ಣದ್ದು. ಇದರ ಬೀಜಗಳು ಸಣ್ಣವು.
ಶುಗರ್ ಬೇಬಿ
ಈ ತಳಿಯನ್ನು ಉತ್ತರ ಅಮೆರಿಕದಿಂದ ತರಿಸಲಾಗಿದೆ. ಇದರ ಹಣ್ಣಿನ ತೂಕ ೪ ರಿಂದ ೬ ಕೆ.ಜಿ. ಸಿಪ್ಪೆ ಗಾಜಿನ ಹಸುರು ಬಣ್ಣದ್ದು. ಒಳತಿರುಳು ಕೆಂಪು ಬಣ್ಣದ್ದು, ಸಿಹಿಯಾಗಿದೆ ಮತ್ತು ಬೀಜಗಳು ಸಣ್ಣ.
ನ್ಯೂ ಹೆಮಿಸ್ಫಿಯರ್ ಮಿಡ್ ಗಟ್
ಇದರ ಹಣ್ಣು ೧ ರಿಂದ ೨ ಕೆ.ಜಿ. ತೂಗುತ್ತವೆ. ಮೇಲ್ಮೈ ಕಡುಹಸುರು ಬಣ್ಣದ್ದು, ತಿರುಳು ಕೆಂಪು ಮತ್ತು ರುಚಿಕರ. ಈ ತಳಿ ವಿಶಾಲವಾಗಿ ಬೆಳೆಯದೆ ಇರುವುದರಿಂದ ಮನೆ ಕೈತೋಟಗಳಲ್ಲಿ ಬೆಳೆಯುವುದಕ್ಕೆ ಯೊಗ್ಯವಾಗಿದೆ.

ಬೇಸಾಯ
ಕಲ್ಲಂಗಡಿ ಶುದ್ಧವಾದ ಬೇಸಗೆ ಬೆಳೆ. ಇದರ ಬೇಸಾಯಕ್ಕೆ ಹೆಚ್ಚು ಉಷ್ಣತೆ ಮತ್ತು ಒಣ ಹವಾಗುಣ ಅಗತ್ಯ. ತಂಪಾದ ಹವಾಗುಣದಲ್ಲಿ ಬಿತ್ತಿದ ಬೀಜಗಳ ಮೊಳೆಯುವ ಸಂಖ್ಯೆ ಕಡಿಮೆಯಾಗುತ್ತದೆಯಲ್ಲದೆ ಸಸ್ಯದಲ್ಲಿ ಎಲೆಗಳ ಸಂಖ್ಯೆ ಕಡಿಮೆಯಾಗುವುದರಿಂದ ಇಳುವರಿಯೂ ಕಡಿಮೆ; ಮತ್ತು ರೋಗಗಳಿಗೆ ತುತ್ತಾಗುವ ಸಂಭವವೂ ಹೆಚ್ಚು. ರಭಸವಾದ ಗಾಳಿ ಬೀಸುವಾಗ ಪರಾಗ ವಿತರಣೆಯಾಗದೆ ಫಲ ತೀರ ಕಡಿಮೆಯಾಗುತ್ತದೆ. ಒಣ ಹವಾಗುಣದಲ್ಲಿ ಬೆಳೆದ ಹಣ್ಣು ತಂಪಾದ ಹವಾಗುಣದಲ್ಲಿ ಬೆಳೆದ ಹಣ್ಣಿಗಿಂತ ಸಿಹಿಯಾಗಿರುತ್ತದೆ. ಕಲ್ಲಂಗಡಿಯನ್ನು ಅನೇಕ ವಿಧವಾದ ಮಣ್ಣುಗಳಲ್ಲಿ ಬೆಳೆಸ ಬಹುದಾದರೂ ಮರಳುಗೋಡು ಮತ್ತು ಜೇಡಿಗೋಡು ಮಣ್ಣು ಶ್ರೇಷ್ಠವಾದವು. ಬೇಸಗೆ ಕಾಲದಲ್ಲಿ ಕೆರೆ ಅಂಗಳ ಮತ್ತು ನದಿಯ ದಂಡೆಗಳಲ್ಲಿ ಕಲ್ಲಂಗಡಿ ಬೇಸಾಯ ಮಾಡುವುದು ಸಾಮಾನ್ಯವಾದ ರೂಢಿ. ಈ ರೀತಿ ಬೇಸಾಯ ಮಾಡುವಾಗ ಭೂಮಿಯಲ್ಲಿನ ಜಲಮಟ್ಟವನ್ನು ತಿಳಿಯಬೇಕು. ಜಲಮಟ್ಟ ಮೇಲಿರುವ ಭೂಮಿಯಲ್ಲಿ ಕಲ್ಲಂಗಡಿ ಬೇಸಾಯ ಮಾಡುವಾಗ ಮಣ್ಣನ್ನು ಬೇಕಾದ ಅಂತರದಲ್ಲಿ ಏರು ಹಾಕಿ ಅವುಗಳ ಮೇಲೆ ಕಲ್ಲಂಗಡಿ ಬೇಸಾಯ ಮಾಡಬೇಕು. ಜಲಮಟ್ಟ ಕೆಳಗಿರುವ ಕೆರೆ ಅಂಗಳ ಅಥವಾ ನದಿಯ ದಂಡೆಯಲ್ಲಿ ಕಲ್ಲಂಗಡಿ ಬೇಸಾಯ ಮಾಡುವಾಗ ಸುಮಾರು ೧ ಮೀ ಆಳದ ಕಾಲುವೆಗಳನ್ನು ತೆಗೆದು ಬೀಜ ಬಿತ್ತಬೇಕು. ಕಲ್ಲಂಗಡಿಯನ್ನು ೫.೮ರಿಂದ ೮.೦ ಠಿಊ ಇರುವ ಮಣ್ಣಿನಲ್ಲಿ ಬೆಳೆಸಬಹುದು. ಆದರೆ ೭.೨-೮.೦ ಠಿಊ ಇರುವ ಮಣ್ಣು ಇದರ ಬೆಸಾಯಕ್ಕೆ ಸಮತೂಕವಾದ್ದು. ಇದು ಸ್ವಲ್ಪ ಮಟ್ಟಿಗೆ ಆಮ್ಲತೆಯನ್ನು ಸಹಿಸಬಲ್ಲುದು. ಹೆಚ್ಚು ಆಮ್ಲತೆಯಿರುವ ಮಣ್ಣಿನಲ್ಲಿ ಇದರ ಬೇಸಾಯ ಮಾಡುವಾಗ ಬೀಜ ಬಿತ್ತುವುದಕ್ಕೆ ಆರು ವಾರಗಳ ಮೊದಲು ಸುಣ್ಣವನ್ನು ಹಾಕಬೇಕು.
ಸಾಮಾನ್ಯವಾಗಿ ಕಲ್ಲಂಗಡಿ ಶುದ್ಧ ಬೆಳೆ (ಪ್ಯುರ್ ಕ್ರಾಪ್). ಆದರೆ ತೋಟಗಳಲ್ಲಿ ಇದರ ಬೇಸಾಯ ಮಾಡುವಾಗ ಬದುಗಳ ಮೇಲೆ ಈರುಳ್ಳಿ ಕೊತ್ತಂಬರಿ ಮುಂತಾದವುಗಳನ್ನು ಬೆಳೆಸುವುದು ಕೆಲವು ಪ್ರದೇಶಗಳಲ್ಲಿ ರೂಢಿಯಲ್ಲಿದೆ. ನಾಲಾ ಪ್ರದೇಶಗಳಲ್ಲಿ ಬತ್ತದೊಂದಿಗೊ ಕಬ್ಬಿನೊಂದಿಗೊ ಕಲ್ಲಂಗಡಿಯನ್ನು ಮಿಶ್ರಬೆಳೆಯಾಗಿ ಬೆಳೆಸುವ ರೂಢಿ ಉಂಟು. ಕಲ್ಲಂಗಡಿ ಬೀಜ ನಾಟಿ ಮಾಡುವಾಗ ಸೊಪ್ಪು ಬೀಜವನ್ನು ಉಪ ಬೆಳೆಯಾಗಿ ಬಿತ್ತಿ ಒಂದು ತಿಂಗಳ ಅನಂತರ ಎಕರೆಗೆ ೩೨ ಕೆಜಿ ಸಾರ ಜನಕ, ೨೦ ಕೆಜಿ ರಂಜಕ ಮತ್ತು ೨೦ ಕೆಜಿ ಪೊಟ್ಯಾಷ್, ಹಾಕಿದರೆ ಉತ್ತಮ.

ಬೀಜ ಬಿತ್ತದ ಸುಮಾರು ೧ ತಿಂಗಳಿಗೆ ಹಂಬು ಹರಿಯಲು ಪ್ರಾರಂಭಿಸುತ್ತದೆ. ಆಗ ಮೊದಲ ಸಾರಿ ಕಳೆ ತೆಗೆದು ಸಸ್ಯದ ಬುಡಗಳ ಸುತ್ತಲೂ ಬೇಸಾಯ ಮಾಡಿ, ಮಣ್ಣನ್ನು ಬುಡಕ್ಕೆ ಏರು ಹಾಕಬೇಕು. ಮೊದಲು ಬಿಟ್ಟ ಕಾಯಿಗಳನ್ನು ಸಾಮಾನ್ಯವಾಗಿ ತೆಗೆದುಹಾಕುತ್ತಾರೆ. ಇದರಿಂದ ಅನಂತರ ಬಿಡುವ ಕಾಯಿಗಳು ದಪ್ಪವಾಗುತ್ತವೆ.
ಕಲ್ಲಂಗಡಿ ಬೀಜ ಬಿತ್ತಿದ ಒಂದು ವಾರದಲ್ಲಿ ಮೊಳೆತು ಸುಮಾರು ೨ ತಿಂಗಳಿಗೆ ಹೂ ಬಿಟ್ಟು ೨೧/೨ ತಿಂಗಳಿಗೆ ಫಲವನ್ನು ಕೊಡುತ್ತದೆ. ಬಲಿತ ಕಾಯಿಗಳನ್ನು ಕೈಯಿಂದ ಮೃದುವಾಗಿ ತಟ್ಟಿದಾಗ ಒಡೆದ ಮಡಕೆ ಶಬ್ದ ಬರುತ್ತದೆ. ಆಗ ಅವುಗಳ ತೊಟ್ಟನ್ನು ಚಾಕುವಿನಿಂದ ಕೊಯ್ದು ಹಂಬಿಗೆ ನೋವು ತಗಲದಂತೆ ಎಚ್ಚರಿಕೆಯಿಂದ ಪ್ರತ್ಯೇಕಿಸಬೇಕು. ಹಣ್ಣಾದ ಮೇಲೆ, ಬೆರಳಿನಿಂದ ಲಘುವಾಗಿ ಒತ್ತಿದರೆ ಸಿಪ್ಪೆ ಸ್ವಲ್ಪ ತಗ್ಗುತ್ತದೆ ಮತ್ತು ಸಿಪ್ಪೆಯ ಬಣ್ಣ ಬದಲಾಯಿಸುತ್ತದೆ.

ಕಲ್ಲಂಗಡಿಯ ಇಳುವರಿ ತಳಿ ಮತ್ತು ಬೇಸಾಯ ಕ್ರಮವನ್ನು ಅನುಸರಿಸುತ್ತದೆ. ಎಕರೆಗೆ ಸುಮಾರು ೪,೦೦೦ ದಿಂದ ೬,೦೦೦ ಕೆಜಿ ಹಣ್ಣು ಸಿಕ್ಕುತ್ತದೆ. ಬೇಸಾಯದ ಕ್ರಮ ಸರಿಯಾಗಿದ್ದಲ್ಲಿ ಒಂದೊಂದು ಹಂಬಿನಿಂದಲೂ ಸುಮಾರು ೨೫-೪೦ ಕಾಯಿಗಳನ್ನು ಪಡೆಯಬಹುದು.

ಬಳಕೆ
ಪ್ರಮುಖವಾಗಿ ಇದು ಅತ್ಯಂತ ರುಚಿಯಾದ ಬೇಸಗೆ ಹಣ್ಣೆಂದು ಪ್ರಸಿದ್ಧವಾಗಿದೆ. ಇದರ ರಸ ಬಹಳ ತಂಪುಗೊಳಿಸುವ ಹಾಗೂ ಚೇತೋಹಾರಿಯಾದ ಪಾನೀಯವೆಂದು ಹೆಸರಾಗಿದೆ. ರಾಜಸ್ತಾನದ ಕೆಲವೆಡೆಗಳಲ್ಲಿ ಇದರ ಕಾಯಿಗಳನ್ನು ತರಕಾರಿಯಾಗಿಯೂ ಉಪಯೋಗಿಸುವುದುಂಟು. ಕೆಲವು ಪ್ರದೇಶಗಳಲ್ಲಿ ಸಹಿತಿಂಡಿ ಮಾಡಲೂ ಉಪ್ಪಿನ ಕಾಯಿಯಾಗಿಯೂ ಇದನ್ನು ಬಳಸುವ ರೂಢಿಯಿದೆ. ಕಿರ್ಬತ್ ಎಂದು ಕರೆಯಲಾಗುವ ಒಂದು ಸ್ವಾಭಾವಿಕ ತಳಿಯ ಕಲ್ಲಂಗಡಿ ಹಣ್ಣು ಕಹಿರುಚಿಯುಳ್ಳದ್ದು. ಅದು ವಿರೇಚಕ ಗುಣವುಳ್ಳದ್ದು. ಅಮೆರಿಕದಲ್ಲಿ ಬೆಳೆಸುವ ಗಟ್ಟಿತಿರುಳಿನ ಸಿಟ್ರನ್ ಎಂಬ ತಳಿಯ ಹಣ್ಣಿನಿಂದ ಜಾಮ್, ಜೆಲಿ ಮುಂತಾದುವನ್ನು ಮಾಡುತ್ತಾರೆ. ಕಲ್ಲಂಗಡಿಯ ಬೀಜಕ್ಕೆ ತಂಪುಗೊಳಿಸುವ ಮತ್ತು ಮೂತ್ರೋತ್ತೇಜಕ ಗುಣಗಳಿವೆ. ಹಣ್ಣಿನ ರಾಸಾಯನಿಕ ಸಂಯೋಜನೆ ಹೀಗಿದೆ: ತೇವಾಂಶ ಶೇ. ೯೫.೭; ವ್ರೋಟೀನು ಶೇ. ೦.೨; ಕೊಬ್ಬು ಶೇ.೦.೨; ಕಾರ್ಬೊಹೈಡ್ರೇಟುಗಳು ಶೇ. ೩.೩; ಲವಣಾಂಶ ಶೇ. ೦.೩; ಹಾಗೂ ಪ್ರತಿ ೧೦೦ ಗ್ರಾಂ ಹಣ್ಣಿಗೆ ೧೧ ಮಿ.ಗ್ರಾಂ ಕ್ಯಾಲಿಯಂ, ೧೨ ಮಿ.ಗ್ರಾಂ. ರಂಜಕ, ೭.೯ ಮಿ.ಗ್ರಾಂ. ಕಬ್ಬಿಣ. ೪೨ ಮಿ.ಗ್ರಾಂ ಗಂಧಕ ಇತ್ಯಾದಿ ಮತ್ತು ೦.೧೬ ಮಿ.ಗ್ರಾಂ ವಿಟಮಿನ್ ಬಿ ಹಾಗೂ ೧ ಮಿ.ಗ್ರಾಂ ವಿಟಮಿನ್ ಸಿ.

ಕಲ್ಲಂಗಡಿಗೆ ರೋಗ
ಕಲ್ಲಂಗಡಿಗೆ ಪ್ಯುಸೇರಿಯಮ್ ಆಕ್ಸಿನ್ಪೋರಮ್ ಎಂಬ ಬೂಷ್ಟು ತಗುಲಿ ಸೊರಗು ರೋಗವನ್ನು (ವಿಲ್ಟ್‌) ಉಂಟುಮಾಡುತ್ತದೆ. ಹಂಬಿನ ತುದಿಗಳು ಬಾಡಿ ಕಾಂಡ ಕಂದುಬಣ್ಣಕ್ಕೆ ತಿರುಗುವುದು ಈ ರೋಗದ ಮುಖ್ಯಲಕ್ಷಣ. ಇದರಿಂದಾಗಿ ಇಳುವರಿ ಕಡಿಮೆಯಾಗುತ್ತದೆ. ರೋಗನಿರೋಧಕ ತಳಿಗಳನ್ನು ಬೆಳೆಸುವುದರಿಂದ ಈ ರೋಗವನ್ನು ತಡೆಗಟ್ಟಬಹುದು. ಇದಲ್ಲದೆ ಹಲವಾರು ಬಗೆಯ ಜೀರುಂಡೆಗಳು, ಕತ್ತರಿ ಹುಳುಗಳು, ತಿಗಣೆಗಳು ಮತ್ತು ಉಣ್ಣಿಗಳೂ ಕಲ್ಲಂಗಡಿಗೆ ತಗುಲಿ ನಷ್ಟವನ್ನುಂಟುಮಾಡಬಲ್ಲವು.	(ಡಿ.ಎಂ.; ಎಸ್.ಕೆ.ಟಿ.; ಟಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ